ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿದ್ದರ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಕಿಚ್ಚವಾಡಿ ಗ್ರಾಮದ ಗೋಪಿ ಜಯಪ್ರಕಾಶ್ ಮತ್ತು ಅವರ ದಲಿತ ಕುಟುಂಬ ಚಿಕ್ಕಮ್ಮ ದೇವಿ ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿದರು.
ಕಿಚ್ಚವಾಡಿ ಗ್ರಾಮದಲ್ಲಿ ಚನ್ನಕೇಶವ, ಬಸವೇಶ್ವರ, ಲಕ್ಷ್ಮಿ ದೇವಿ, ಹುಚ್ಚಮ್ಮ, ಮಾಸ್ತಮ್ಮ ಮತ್ತು ಕೋಣೆ ಚಿಕ್ಕಮ್ಮ ದೇವಸ್ಥಾನ ಗಳಿದ್ದು, ಎಲ್ಲಾ ಜನಾಂಗದವರಿಗೂ ಮುಕ್ತ ಪ್ರವೇಶ ಕಲ್ಪಿಸಿದ್ದರೂ ಕೋಣೆಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ಮಾತ್ರ ದಲಿತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ಗೋಪಿಜಯಪ್ರಕಾಶ್ ಅವರು ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಕಳೆದ ಜಿಲ್ಲಾ ಪೊಲೀಸ್ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯಲ್ಲಿ ಮನವಿ ಮಾಡಿದ್ದರು.
ಮನವಿ ಮಾಡಿದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಓಂ ಪ್ರಕಾಶ್ ತಹಸೀಲ್ದಾರ್ ರಶ್ಮಿ.ಯು ಅವರ ನೇತೃತ್ವದಲ್ಲಿ ಅಕ್ಟೋಬರ್ ಅ.6 ರಂದು ದೇವಾಲಯ ಪ್ರವೇಶ ಕಲ್ಪಿಸಿಕೊಡಲು ಹೋದಾಗ ಸವರ್ಣೀಯರು ಇದು ನಮ್ಮ ಸ್ವಂತ ದೇವಾಲಯ ನಮಗೆ ಮಾತ್ರ ಸೇರಿದ್ದು ಎಂದು ಅಡ್ಡಿಪಡಿಸಿದ್ದರು. ನಂತರ ಡಿ ಎಚ್ ಎಸ್ ನ ಜಿಲ್ಲಾಧ್ಯಕ್ಷರಾದ ರಾಜು ವೆಂಕಟಪ್ಪ ನೇತೃತ್ವದಲ್ಲಿ ದಲ್ಲಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಹಾಗೂ ಕುಣಿಗಲ್ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶಿವಲಿಂಗಯ್ಯನವರ ನೇತೃತ್ವದಲ್ಲಿ ದೇವಸ್ಥಾನ ಸ್ಥಳ ಪರಿಶೀಲನೆ ಮಾಡಿದಾಗ ಸ್ಥಳೀಯ ಶಾಸಕರ ಅಭಿವೃದ್ಧಿ ಅನುದಾನದಲ್ಲಿ ದೇವಸ್ಥಾನಕ್ಕೆ ಹಣ ಬಿಡುಗಡೆಯಾಗಿರುವುದು ಮತ್ತು ಪಂಚಾಯಿತಿಯಿಂದ ವಿದ್ಯುತ್, ನೀರು ಇತರೆ ಮೂಲಭೂತ ಸೌಕರ್ಯಗಳನ್ನು ಪಡೆದಿರುವುದು ಖಾತ್ರಿಆಯಿತು ಹಾಗಾಗಿ ಇದು ಸಾರ್ವಜನಿಕ ದೇವಸ್ಥಾನ ಊರ ಮಧ್ಯದಲ್ಲಿ ನಿರ್ಮಾಣವಾಗಿರುವುದರಿಂದ ಸಾರ್ವಜನಿಕವಾಗಿ ಯಾರು ಬೇಕಾದರೂ ಪೂಜೆ ಮಾಡಿಸಬಹುದು ಎಲ್ಲರಿಗೂ ಮುಕ್ತ ಅವಕಾಶವಿರಬೇಕು ಎಂದು ಸಂಘಟನೆ ಹೋರಾಟ ರೂಪಿಸಿತು.
ಮುಂದುವರಿದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಲ್ಲಿ ವಿಷಯ ಚರ್ಚೆಗೆ ಬಂದು ಅಕ್ಟೋಬರ್ 30 ರಂದು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಪರವಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಿದರು, ತಾಲೂಕು ಆಡಳಿತ ಗುರುವಾರ ಗ್ರಾಮಕ್ಕೆ ತೆರಳಿ ದೇವಸ್ಥಾನದ ಪ್ರಮುಖರು ಮತ್ತು ಅರ್ಚಕ ಹಾಗೂ ಗ್ರಾಮಸ್ಥರೊಂದಿಗೆ ಮಾತನಾಡಿ ಗ್ರಾಮಸ್ಥರು ಸಮ್ಮುಖದಲ್ಲಿ ದೇವಾಲಯ ಪ್ರವೇಶ ಕಲ್ಪಿಸಲು ಸಾಕಷ್ಟು ಕಸರತ್ತು ನಡೆಸಿದರೂ ಗ್ರಾಮಸ್ಥರು ಒಪ್ಪದ ಕಾರಣ ದೇವಸ್ಥಾನದ ಬೀಗ ಪಡೆದ ಅಧಿಕಾರಿಗಳು ದೇವಾಲಯದ ಬೀಗ ತೆಗೆಸಿ ಉಜ್ಜನಿ ಗ್ರಾಮದ ಗಣಪತಿ ದೇವಾಲಯದ ಸುನಿಲ್ ಎಂಬ ಅರ್ಚಕರನ್ನು ಕರೆಯಿಸಿ ದಲಿತ ಕುಟುಂಬಕ್ಕೆ ದೇವಾಲಯ ಪ್ರವೇಶ ಕಲ್ಪಿಸಿದಲ್ಲದೆ ಪೂಜೆಗೂ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಒಟ್ಟಾರೆ ಕುಣಿಗಲ್ ತಾಲೂಕಿನಲ್ಲಿ ದಲಿತ ಹಕ್ಕುಗಳ ಸಮಿತಿ ಮತ್ತು ಇತರೆ ದಲಿತ ಮುಖಂಡರುಗಳ ಐಕ್ಯ ಹೋರಾಟದಿಂದ ಅಸ್ಪೃಶ್ಯತಾ ಆಚರಣೆ ವಿರುದ್ಧ ಒಂದು ಐತಿಹಾಸಿಕ ಬದಲಾವಣೆ ತರಲಾಗಿದೆ.
ಈ ಹೋರಾಟದಲ್ಲಿ ದಲಿತ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರಾಜಣ್ಣ, ಜಿಲ್ಲಾಧ್ಯಕ್ಷರಾದ ರಾಜು ವೆಂಕಟಪ್ಪ ಕಾರ್ಯದರ್ಶಿ ಸತೀಶ್ ಬೆಳ್ಳಿಗೆರೆ, ಉಜನಿ ಸಂತೋಷ್ , ಪ್ರಮೋದ್ ತಿಪ್ಪೂರು, ಗೋವಿಂದಪ್ಪ ಯಲಿಯೂರು, ಗಂಗಾಧರಣ್ಣ ಕುಣಿಗಲ್ ಟೌನ್ ಮಹೇಶ್ ಕುರುಬರ ಶೆಟ್ಟಿಹಳ್ಳಿ , ದಲಿತ ಮುಖಂಡರಾದ ದಲಿತ್ ನಾರಾಯಣ್ ಸೇರಿದಂತೆ ಅನೇಕ ದಲಿತ ಮುಖಂಡರು ಈ ಹೋರಾಟದಲ್ಲಿ ಭಾಗವಹಿಸಿದ್ದರು.


