ಹಿಟ್ ಸಿನಿಮಾಗಳ ಸರದಾರ ಸಂತೋಷ್ ಆನಂದ್ ರಾಮ್ ಇತ್ತೀಚೆಗೆ ಸೈಲೆಂಟ್ ಆಗಿಬಿಟ್ಟಿದ್ದಾರೆ. ‘ಯುವ‘ ಬಳಿಕ ಯಾವುದೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿಲ್ಲ. ಇದೀಗ ಸುದೀಪ್ ಜೊತೆ ಸಂತು ಕೈಜೋಡಿಸುವ ಸುದ್ದಿ ಬಂದಿದೆ. ಇದನ್ನು ಕೇಳಿ ಕಿಚ್ಚನ ಅಭಿಮಾನಿಗಳು ಖುಷಿಯಾಗಿದ್ದಾರೆ.
ಬಿಗ್ಬಾಸ್ ಜೊತೆ ಜೊತೆಗೆ ಸುದೀಪ್ ‘ಬಿಲ್ಲ ರಂಗ ಬಾಷ‘ ಹಾಗೂ ‘ಮಾರ್ಕ್‘ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವರ್ಷಾಂತ್ಯಕ್ಕೆ ‘ಮಾರ್ಕ್‘ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಆ ಬಳಿಕ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ‘ಬಿಲ್ಲ ರಂಗ ಬಾಷ‘ ದೊಡ್ಡ ಸಿನಿಮಾ ಆಗಿರುವುದರಿಂದ ಬಹಳ ತಡವಾಗಲಿದೆ. ಅದರ ನಡುವೆ ಸಂತೋಷ್ ಆನಂದ್ ರಾಮ್ ಜೊತೆ ಕಿಚ್ಚ ಕೈಜೋಡಿಸಲಿದ್ದಾರೆ.
ಸುದೀಪ್ – ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ಸಿನಿಮಾ ಬಗ್ಗೆ ಸಂಗೀತ ನಿರ್ದೇಶಕ ತಮನ್ ಮಾಹಿತಿ ನೀಡಿದ್ದಾರೆ. ‘ತೆಲುಗು ಇಂಡಿಯನ್ ಐಡೆಲ್‘ ಕಿರುತೆರೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ತಮನ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡುತ್ತಾ ಈ ವಿಚಾರವನ್ಜು ಬಹಿರಂಗಪಡಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ದೊಡ್ಡ ಸಿನಿಮಾಗಳನ್ನು ಅನೌನ್ಸ್ ಮಾಡಲು ಬಹಳ ತಯಾರಿ ನಡೆಸುತ್ತಾರೆ. ವಿಭಿನ್ನವಾಗಿ ಪ್ಲ್ಯಾನ್ ಮಾಡುತ್ತಾರೆ. ಆದರೆ ಸುದೀಪ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬೋ ಸಿನಿಮಾ ಬಗ್ಗೆ ಬಹಳ ಕ್ಯಾಷ್ಯುವಲ್ ಆಗಿ ಮಾತನಾಡುತ್ತಾ ತಮನ್ ಹೇಳಿಬಿಟ್ಟಿದ್ದಾರೆ. ಕರ್ನಾಟಕ ಮೂಲದ ಗಾಯಕ ದರ್ಶನ್ ನಾರಾಯನ್ ‘ತೆಲುಗು ಇಂಡಿಯನ್ ಐಡೆಲ್‘ ಸ್ಪರ್ಧಿಸಿದ್ದಾರೆ. ಅವರ ಗಾಯನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದರ್ಶನ್ ಗಾಯನ ಮೆಚ್ಚಿ ಕಾಮೆಂಟ್ ಮಾಡುವಾಗ ತಮನ್ ಈ ಸಿನಿಮಾ ಟಾಪಿಕ್ ತೆಗೆದಿದ್ದಾರೆ.
“ಸಂತೋಷ್ ಆನಂದ್ ರಾಮ್ ಹಾಗೂ ಸುದೀಪ್ ಅವರ ಚಿತ್ರಕ್ಕಾಗಿ ನಾನು ಮುಂದೆ ಕೆಲಸ ಮಾಡುತ್ತಿದ್ದೀನಿ” ಎಂದು ತಮನ್ ಹೇಳಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ‘ ಚಿತ್ರಕ್ಕೆ ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದರು.
ಒಂದೂವರೆ ವರ್ಷದಿಂದ ಸಂತೋಷ್ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. ಈ ಬಗ್ಗೆ ಕೇಳಿದಾಗ ಸ್ಕ್ರಿಪ್ಟ್ ಕೆಲಸ ನಡೀತಿದೆ. ಎಲ್ಲಾ ಫೈನಲ್ ಆದ ಬಳಿಕ ತಿಳಿಸುತ್ತೇನೆ ಎಂದು ಹೇಳ್ತಾ ಬರ್ತಿದ್ದಾರೆ. ಆದರೆ ತೆರೆಮರೆಯಲ್ಲಿ ಸುದೀಪ್ ಜೊತೆ ಸಿನಿಮಾ ಮಾಡಲು ಕರಸತ್ತು ನಡೆಸುತ್ತಿರುವುದು ಗೊತ್ತಾಗುತ್ತಿದೆ.
ಯಶ್ ಹಾಗೂ ರಾಧಿಕಾ ಪಂಡಿತ್ ನಟನೆಯ ‘ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ‘ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸಂತೋಷ್ ಗುರ್ತಿಸಿಕೊಂಡಿದ್ದರು. ಮೊದಲ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಬಳಿಕ ಪುನೀತ್ ರಾಜ್ಕುಮಾರ್ ಜೊತೆ ಮಾಡಿದ ‘ರಾಜಕುಮಾರ‘ ಸಿನಿಮಾ ಕೂಡ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಬಳಿಕ ‘ಯುವರತ್ನ‘, ‘ರಾಘವೇಂದ್ರ ಸ್ಟೋರ್ಸ್‘ ಹಾಗೂ ‘ಯುವ‘ ಚಿತ್ರಗಳನ್ನು ಕಟ್ಟಿಕೊಟ್ಟಿದ್ದರು. ಅಪ್ಪು ಜೊತೆ ಮತ್ತೊಂದು ಸಿನಿಮಾ ಮಾತುಕತೆ ಸಹ ನಡೆದಿತ್ತು.


