3ನೇ ಸುತ್ತಿನ ಸೀಟು ಹಂಚಿಕೆಗೆ ಹೆಚ್ಚುವರಿಯಾಗಿ ಇನ್ನೂ 200 ವೈದ್ಯಕೀಯ ಸೀಟು ಲಭ್ಯವಾಗಿದ್ದು, ಅರ್ಹರು ಅ.18ರಂದು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆ ಒಳಗೆ ಮುಂಗಡವಾಗಿ ಕೋರ್ಸ್ ಶುಲ್ಕ ಕಟ್ಟಿ ಆಪ್ಷನ್ಸ್ ದಾಖಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಚಲನ್ ಡೌನ್‌ಲೋಡ್ ಮಾಡಿಕೊಂಡು ಸಂಜೆ 4ಗಂಟೆ ಒಳಗೆ ಕೋರ್ಸ್ ಶುಲ್ಕ ಕಟ್ಟಬೇಕು. ಆಪ್ಷನ್ಸ್ ದಾಖಲಿಸಲು ಸಂಜೆ 5 ಗಂಟೆವರೆಗೆ ಅವಕಾಶ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಮೂರನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾದ ನಂತರ ಒಟ್ಟು ಒಂಬತ್ತು ಕಾಲೇಜುಗಳ ಒಟ್ಟು 450 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಿವೆ ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರಿನ ಎಂವಿಜೆ, ಕಲ್ಬುರ್ಗಿಯ ಮಹದೇವಪ್ಪ ರಾಂಪುರೆ, ದಕ್ಷಿಣ ಕನ್ನಡ ಜಿಲ್ಲೆಯ ಕೆ.ವೆಂಕಟರಮಣಗೌಡ ಹಾಗೂ ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜುಗಳಿಗೆ ಹೆಚ್ಚುವರಿಯಾಗಿ ತಲಾ 50 ಸೀಟುಗಳನ್ನು ಎಂಸಿಸಿ ಮಂಜೂರು ಮಾಡಿದ್ದು, ಅದರ ಸೀಟ್ ಮ್ಯಾಟ್ರಿಕ್ಸ್ ಅನ್ನು ಶುಕ್ರವಾರ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರವೇಶ ಪಡೆದವರಿಗೂ ಅವಕಾಶ
ಈಗಾಗಲೇ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದವರಿಗೂ ಆಪ್ಷನ್ಸ್ ದಾಖಲಿಸಲು ಅ.18ರಂದು ಬೆಳಿಗ್ಗೆ 8 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.


