ದುಬೈನಲ್ಲಿ ‘ವಿಕಸಿತ ಭಾರತ ರನ್’ಗೆ ಭರ್ಜರಿ ಸ್ಪಂದನೆ; 3,000ಕ್ಕೂ ಹೆಚ್ಚು ಭಾರತೀಯರ ನೋಂದಣಿ

2 Min Read
2 Min Read

ದುಬೈ: ಸೇವಾ ಮನೋಭಾವ, ಸಮುದಾಯದ ಭಾಗವಹಿಸುವಿಕೆ ಹಾಗೂ ರಾಷ್ಟ್ರದ ಅಭಿವೃದ್ಧಿಯ ಸಂಕಲ್ಪವನ್ನು ಉತ್ತೇಜಿಸುವ ಉದ್ದೇಶದಿಂದ ದುಬೈನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ವತಿಯಿಂದ ‘ಸೇವಾ ಪಖ್ವಾಡಾ’ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಇದರ ಭಾಗವಾಗಿ ಭಾನುವಾರ ಆಯೋಜಿಸಲಾದ ‘ವಿಕಸಿತ ಭಾರತ ರನ್ 2026’ ಕಾರ್ಯಕ್ರಮಕ್ಕೆ ದುಬೈನ ಭಾರತೀಯ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಪ್ರಸಿದ್ಧ ದುಬೈ ಫ್ರೇಮ್ ಸಮೀಪ ನಡೆದ ಈ ಫಿಟ್‌ನೆಸ್ ರನ್‌ ಅನ್ನು ಭಾರತದ ಕಾನ್ಸುಲೇಟ್ ಜನರಲ್, ಇಂಡಿಯನ್ ಪೀಪಲ್ಸ್ ಫೋರಂ (IPF) ಸಹಯೋಗದಲ್ಲಿ ಆಯೋಜಿಸಿತ್ತು.

ಭಾರತದ ಕಾನ್ಸುಲ್ ಜನರಲ್ ಡಾ. ಇ. ವಿಷ್ಣುವರ್ಧನ್ ರೆಡ್ಡಿ ಅವರು ಓಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಸುಮಾರು 3,000 ಮಂದಿ ನೋಂದಣಿ ಮಾಡಿಕೊಂಡಿದ್ದು, ಭಾರತೀಯ ಸಮುದಾಯದ ಉತ್ಸಾಹಭರಿತ ಭಾಗವಹಿಸುವಿಕೆ ಕಂಡುಬಂತು.

‘ವಿಕಸಿತ ಭಾರತ’ ಸಂಕಲ್ಪಕ್ಕೆ ಸಮುದಾಯದ ಬೆಂಬಲ

ಕಾರ್ಯಕ್ರಮವು ಕೇವಲ ದೈಹಿಕ ಕ್ಷಮತೆಯ ಉತ್ತೇಜನಕ್ಕೆ ಸೀಮಿತವಾಗಿರದೆ, ಭಾರತದ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ವಿದೇಶದಲ್ಲಿರುವ ಭಾರತೀಯ ಸಮುದಾಯವನ್ನು ಸಂಪರ್ಕಿಸುವ ವೇದಿಕೆಯಾಗಿಯೂ ರೂಪುಗೊಂಡಿತು.

ದುಬೈನ ಭಾರತೀಯ ಸಮುದಾಯದ ವಿವಿಧ ವರ್ಗಗಳ ಜನರು ಪಾಲ್ಗೊಂಡು, ಆರೋಗ್ಯಕರ ಜೀವನಶೈಲಿ, ಸಮುದಾಯದ ಒಗ್ಗಟ್ಟು ಹಾಗೂ ದೇಶದ ಅಭಿವೃದ್ಧಿಯ ಸಂಕಲ್ಪಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಭಾರತೀಯ ಕಾರ್ಮಿಕರಿಗಾಗಿ ವಿಶೇಷ ಕಾರ್ಯಕ್ರಮ

ಸೇವಾ ಪಖ್ವಾಡಾ ಅಂಗವಾಗಿ ಭಾರತೀಯ ಕಾರ್ಮಿಕರಿಗಾಗಿ ವಿಶೇಷ ಕಾರ್ಮಿಕ ಶಿಬಿರವನ್ನೂ ಆಯೋಜಿಸಲಾಯಿತು. ಇಲ್ಲಿ ಹಣಕಾಸು ನಿರ್ವಹಣೆ ಹಾಗೂ ವೈದ್ಯಕೀಯ ಅರಿವು ಕುರಿತು ಮಾಹಿತಿ ನೀಡುವುದರ ಜೊತೆಗೆ, ದುಬೈನ ಭಾರತೀಯ ಕಾನ್ಸುಲೇಟ್ ಒದಗಿಸುವ ವಿವಿಧ ಸೇವೆಗಳು ಮತ್ತು ಸಹಾಯವಾಣಿ ಸಂಖ್ಯೆಗಳ ಕುರಿತು ಕಾರ್ಮಿಕರಿಗೆ ಮಾಹಿತಿ ನೀಡಲಾಯಿತು.

ವಿದೇಶದಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಗೆ ಅಗತ್ಯ ಸಂದರ್ಭದಲ್ಲಿ ಲಭ್ಯವಿರುವ ಸರ್ಕಾರಿ ನೆರವು ಹಾಗೂ ಕಾನ್ಸುಲೇಟ್ ಸೇವೆಗಳ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.

ಗುರುನಾನಕ್ ದರ್ಬಾರ್ ಗುರುದ್ವಾರದಲ್ಲಿ ಲಂಗರ್ ಸೇವೆ

ಇದಕ್ಕೂ ಮುನ್ನ ಭಾರತೀಯ ಕಾನ್ಸುಲೇಟ್ ಅಧಿಕಾರಿಗಳು ದುಬೈನ ಗುರುನಾನಕ್ ದರ್ಬಾರ್ ಗುರುದ್ವಾರಕ್ಕೆ ಭೇಟಿ ನೀಡಿ, ಸೇವಾ ಪಖ್ವಾಡಾ ಅಂಗವಾಗಿ ಆಯೋಜಿಸಿದ್ದ ಲಂಗರ್ ಸೇವೆಯಲ್ಲಿ ಭಾಗವಹಿಸಿದ್ದರು.

ದುಬೈನಲ್ಲಿ ನಡೆಯುತ್ತಿರುವ ಈ ಸರಣಿ ಕಾರ್ಯಕ್ರಮಗಳ ಮೂಲಕ ಭಾರತೀಯ ಸಮುದಾಯದಲ್ಲಿ ಸೇವಾ ಮನೋಭಾವ, ಪರಸ್ಪರ ಸಹಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂದೇಶವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನ ನಡೆಯುತ್ತಿದೆ.

Share This Article